ಕಾಂಗ್ರೆಸ್‌ ಸರ್ಕಾರದಿಂದ ವಿಶ್ವವಿದ್ಯಾಲಯ ಮುಚ್ಚುವ ಭಾಗ್ಯ: ಬಿಜೆಪಿ ವ್ಯಂಗ್ಯ

0
Vidhanasoudha-300x179

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದಾರೆ. ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುವ ಭಾಗ್ಯವನ್ನು ಕಾಂಗ್ರೆಸ್‌ ನೀಡಿದೆ. ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಲಾಗಿದೆ. ಈಗ ಮಾರಿ ಕಣ್ಣು ಹೋರಿ ಮೇಲೆ ಎಂಬಂತೆ, ಸಿಎಂ ಸಿದ್ದರಾಮಯ್ಯನವರ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಯಾರೂ ಪದವೀಧರರಾಗದೇ ಇದ್ದಲ್ಲಿ ಯುವನಿಧಿ ಯೋಜನೆಯನ್ನು ನಿಲ್ಲಿಸಬಹುದು ಎಂಬುದು ಇವರ ಚಿಂತನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ರಾಜ್ಯ, ದೇಶಗಳ ವಿದ್ಯಾರ್ಥಿಗಳು ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಮಂಡ್ಯದ ವಿಶ್ವವಿದ್ಯಾಲಯವನ್ನು ಮುಚ್ಚಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚು ಕನ್ನಡಿಗರು ಇರುವ ಮಂಡ್ಯದಲ್ಲೇ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಲಾಗಿದೆ. ಉಪನ್ಯಾಸಕರ ನೇಮಕವಿಲ್ಲ, ಅತಿಥಿ ಉಪನ್ಯಾಸರಿಗೆ ವೇತನ ಇಲ್ಲ, ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ಥಿಗೆ ಹಣವಿಲ್ಲ, ಪಠ್ಯಪುಸ್ತಕ-ಸಮವಸ್ತ್ರ ನೀಡಲು ಕಾಸಿಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸುವಾಗ, ಅದರಲ್ಲಿ 342 ಕೋಟಿ ರೂ. ಕೊಟ್ಟರೆ ಸಾಕು. ಇಷ್ಟು ಹಣ ಕೊಡಲಾಗದೇ ಇದ್ದಲ್ಲಿ, ಮತ್ತೇಕೆ ಬಜೆಟ್‌ ಮಂಡಿಸಬೇಕು? 3 ಸಾವಿರ ಬಾರ್‌ಗಳನ್ನು ಮುಚ್ಚುವುದಿಲ್ಲ. ಆದರೆ ವಿವಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ ಎಂದರು.

ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯಗಳ ವಿವಿಗಳಿಗೆ ವಲಸೆ ಹೋಗುತ್ತಾರೆ. ಇಲ್ಲಿ ಪ್ರತಿಭಾವಂತರು ಸಿಗುತ್ತಾರೆ ಎಂಬ ಕಾರಣಕ್ಕೆ ಇನ್‌ವೆಸ್ಟ್‌ ಕರ್ನಾಟಕಕ್ಕೆ ಎಲ್ಲರೂ ಬರುತ್ತಾರೆ. ವಿದ್ಯಾರ್ಥಿಗಳೇ ಇಲ್ಲವೆಂದ ಮೇಲೆ ಯಾವ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ ಎಂದು ಪ್ರಶ್ನೆ ಮಾಡಿದರು.

ಮೈಸೂರಿನಲ್ಲಿ ನಡೆದ ಗಲಭೆ ಪೂರ್ವನಿಯೋಜಿತವಾಗಿದೆ. ಮೂಟೆಗಳಲ್ಲಿ ಕಲ್ಲುಗಳನ್ನು ತಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇಷ್ಟೊಂದು ಮೂಟೆಗಳನ್ನು ತರಲು ಸಮಯ ಬೇಕಾಗುತ್ತದೆ. ಆದರೆ ಸಚಿವ ರಾಜಣ್ಣ ಪೊಲೀಸರನ್ನು ನಿಂದಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಪೊಲೀಸರನ್ನು ಶ್ಲಾಘಿಸಿದ್ದಾರೆ. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ *ನಿರ್ಲಿಪ್ತ ಮನಸ್ಥಿತಿ ಹೊಂದಿದ್ದಾರೆ. ಮಕ್ಕಳು ಕಲ್ಲು ಹೊಡೆದಿದ್ದು, ಹಿರಿಯರು ಸಮಾಧಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಈ ರೀತಿಯಲ್ಲೇ ಚಿಂತಿಸಬೇಕು ಎಂದು ಕಾಂಗ್ರೆಸ್‌ ನಾಯಕರು ಮೊದಲೇ ಹೇಳಿಬಿಡುತ್ತಾರೆ ಎಂದು ದೂರಿದರು.

ಹುಬ್ಬಳ್ಳಿಯಲ್ಲಾದ ಗಲಭೆಯ ಪ್ರಕರಣವನ್ನು ಕೈ ಬಿಡಲಾಗಿದೆ. ಭಗವಾನ್‌ ಎಂಬ ಚಿಂತಕ ಶ್ರೀರಾಮನ ಬಗ್ಗೆ ಹೀನಾಯವಾಗಿ ಮಾತಾಡಿದರೂ ಹಿಂದೂಗಳು ಎಂದೂ ಕಲ್ಲು ಹೊಡೆದಿಲ್ಲ. ಕಾನೂನು ಕಾಪಾಡಬೇಕಾದ ಪೊಲೀಸರ ಕೈಯನ್ನು ಸರ್ಕಾರವೇ ಕೈ ಕಟ್ಟಿ ಹಾಕಿದೆ. ಪೊಲೀಸರನ್ನೇ ತಪ್ಪಿತಸ್ಥರನ್ನಾಗಿ ಮಾಡಿದ್ದು, ಇನ್ನು ಯಾರನ್ನಾದರೂ ಅಮಾನತು ಮಾಡುತ್ತಾರೆ. ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸಲಾಗಿದೆ ಎಂದರು.

ಈ ಘಟನೆಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? ಸಿಸಿಟಿವಿ ಕ್ಯಾಮರಾ ನೋಡಿ ಆರ್‌ಎಸ್‌ಎಸ್‌ ನ ಯಾವ ಸ್ವಯಂಸೇವಕರು ಬಂದಿದ್ದಾರೆ ಎಂದು ತಿಳಿಸಲಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಪ್ರಚೋದನೆಯಿಂದಲೇ ಇಂತಹ ಘಟನೆಗಳು ನಡೆಯಲಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 80 ಕೋಟಿ ಜನರಿಗೆ ನೀಡುತ್ತಿರುವ ಆಹಾರ ಯೋಜನೆಯನ್ನು ಕಾಂಗ್ರೆಸ್‌ ನಾಯಕ *ಶಶಿ ತರೂರ್‌* ಟೀಕಿಸಿದ್ದಾರೆ. ಉಚಿತವಾಗಿ ಅಕ್ಕಿ ನೀಡಬಾರದು ಎಂದು ಅವರು ಹೇಳಿದ್ದಾರೆ. ಆದರೆ ಇದೇ ಕಾಂಗ್ರೆಸ್‌ ಕರ್ನಾಟಕದಲ್ಲಿ ಉಚಿತ ಗ್ಯಾರಂಟಿಗಳನ್ನು ನೀಡುತ್ತಿದೆ. ಅಂದರೆ ಕೇಂದ್ರದಲ್ಲಿ ಕಾಂಗ್ರೆಸ್‌ ಒಂದು ನಿಲುವು ತಾಳಿದರೆ, ರಾಜ್ಯದಲ್ಲಿ ಮತ್ತೊಂದು ನಿಲುವು ಇದೆ. ಮತ ಬೇಕೆಂದಾಗ ಉಚಿತ ಬೇಕು, ಚುನಾವಣೆ ಮುಗಿದ ನಂತರ ಉಚಿತ ಬೇಡ ಎನ್ನುತ್ತಾರೆ. ಇದು ಇವರ ದ್ವಿಮುಖ ನೀತಿ ಎಂದರು.

ಚಾಮರಾಜನಗರ, ಕೊಪ್ಪಳ, ಮಂಡ್ಯ ಸೇರಿದಂತೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳನ್ನು ಮುಂದೆ ತರಲು ವಿವಿಗಳನ್ನು ಸ್ಥಾಪಿಸಲಾಗಿದೆ. ಈಗ ಈ ಜಿಲ್ಲೆಗಳ ಬಡವರು ಮಕ್ಕಳನ್ನು ಎಲ್ಲಿಗೆ ಕಳುಹಿಸಬೇಕು? ಈಗಾಗಲೇ ಮೈಕ್ರೋ ಫೈನಾನ್ಸ್‌ ಸಾಲ ಮಾಡಿ ಜನರು ಬಳಲಿದ್ದಾರೆ. ಈಗ ಶಿಕ್ಷಣಕ್ಕಾಗಿ ಸಾಲ ಮಾಡಿ ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕಿದೆ. ಇನ್ನು ಆಯಾ ಜಿಲ್ಲೆಗಳ ಜನರು ರೊಚ್ಚಿಗೆದ್ದು ಸರ್ಕಾರದ ವಿರುದ್ಧ ಪ್ರತಿಭಟಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *

You may have missed