ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ 50 ಕೋಟಿ, ಬಿಜೆಪಿ-ಜೆಡಿಎಸ್‌ ಕ್ಷೇತ್ರಕ್ಕೆ 25 ಕೋಟಿ ಅನುದಾನ; ಪ್ರತಿಪಕ್ಷ ಆಕ್ರೋಶ

0
bjp- congress Flag

ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಹಾಗೂ ಬಿಜೆಪಿ-ಜೆಡಿಎಸ್‌ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗುವುದೆಂಬ ಸಿಎಂ ನಡೆ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಹಾಗೂ ಬಿಜೆಪಿ-ಜೆಡಿಎಸ್‌ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗುವುದೆಂದು ಹೇಳಿದ್ದಾರೆ. ಈ ರೀತಿ ತಾರತಮ್ಯ ಮಾಡಿ, ಕೇಂದ್ರದ ಮೇಲೆ ತಾರತಮ್ಯದ ಆರೋಪ ಹೊರಿಸುತ್ತಿದ್ದಾರೆ. ಎಲ್ಲ ಶಾಸಕರಿಗೆ ಸಮಾನ ಅನುದಾನ ನೀಡಬೇಕು. ಇದರಿಂದ ಸಮಾನ ಅಭಿವೃದ್ಧಿ ಸಾಧ್ಯ ಎಂದರು.

ಬೆಂಗಳೂರಿನಲ್ಲಿ ಗಟ್ಟಿಯಾದ ಕಲ್ಲು ಇರುವುದರಿಂದ ಸುರಂಗ ಮಾಡುವುದು ಕಷ್ಟ. ಅದರ ಬದಲು ಮೆಟ್ರೊ ಯೋಜನೆಗೆ ಒತ್ತು ನೀಡಬಹುದಿತ್ತು. ಮೊದಲು ಮೇಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಸಾಕು. ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾಗುತ್ತದೆ. ಒಡೆಯುವುದು ಕಾಂಗ್ರೆಸ್‌ನ ಬುದ್ಧಿ. ಅಭಿವೃದ್ಧಿ ಮಾಡುವುದರ ಬದಲು ಒಡೆಯುವುದು ಸರಿಯಲ್ಲ. ಬ್ರ್ಯಾಂಡ್‌ ಬೆಂಗಳೂರಿನ ಹೆಸರಲ್ಲಿ ಇದುವರೆಗೆ ಒಂದು ಯೋಜನೆಯೂ ಜಾರಿಯಾಗಿಲ್ಲ ಎಂದು ಅಶೋಕ್ ದೂರಿದರು.

ಬಿಜೆಪಿ ಸರ್ಕಾರ ಇದ್ದಾಗ ಕೇಳಿದ್ದ ಮನೆಯನ್ನೇ ಕೊಡಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದ ಮನೆ ನೀಡಲು ಅನೇಕ ಪತ್ರಗಳನ್ನು ಬರೆದರೂ ಸರ್ಕಾರ ಸ್ಪಂದಿಸಿಲ್ಲ. ನೀತಿ ಸಂಹಿತೆ, ಶಿಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯುವ ಇವರು, ಇಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ. ವಿರೋಧ ಪಕ್ಷದ ನಾಯಕನಾದ ನನಗೆ ಮನೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.

ಸರ್ಕಾರದಲ್ಲಿ ಹಣವಿಲ್ಲ. ಒಂದು ರೂಪಾಯಿ ಖರ್ಚು ಮಾಡುವಾಗ ಕೂಡ ಬಹಳ ಯೋಚನೆ ಮಾಡಬೇಕು. ಅದಕ್ಕಾಗಿ ಬೀದಿ ವ್ಯಾಪಾರಿಗಳಿಂದ ಬರುವ ಜಿಎಸ್‌ಟಿ ಹೆಚ್ಚಿಸಲು ರಾಜ್ಯ ಸರ್ಕಾರ ಕುತಂತ್ರ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೂ ಹಾನಿಯಾಗಲಿದೆ. ಜನರಿಗೆ ಅನ್ಯಾಯವಾಗಿದ್ದರೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.

Leave a Reply

Your email address will not be published. Required fields are marked *

You may have missed