ಕಾಂಗ್ರೆಸ್: ತಳಮಟ್ಟದಲ್ಲಿ ಹೆಚ್ಚು ಪದಾಧಿಕಾರಿಗಳ ನೇಮಿಸಲು ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ 100 ಗಾಂಧಿ ಭಾರತ ಕಚೇರಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ಈ ತಿಂಗಳ 21ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರು, ಸಿಎಂ ಸೇರಿ ಚರ್ಚೆ ಮಾಡಿ ರಾಜ್ಯದಲ್ಲಿ 100 ಗಾಂಧಿ ಭಾರತ ಕಚೇರಿಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ. ಮುಂದಿನ ತಿಂಗಳು ಫೆಬ್ರವರಿ ತಿಂಗಳಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಒಟ್ಟಿಗೆ ಈ ಎಲ್ಲಾ ಕಚೇರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ 74 ಕಚೇರಿಗಳ ನಿರ್ಮಾಣದ ಜಾಗ ಗುರುತಿಸಲಾಗಿದ್ದು, ಉಳಿದ ಕಚೇರಿಗಳ ನಿರ್ಮಾಣದ ಬಗ್ಗೆ ಪಕ್ಷ ಶೀಘ್ರ ತೀರ್ಮಾನ ಮಾಡಲಿದೆ ಎಂದವರು ವಿವರಿಸಿದರು.
ಇನ್ನು ಈ ವರ್ಷ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗಿದ್ದು, ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲು ಗಮನ ಹರಿಸಲಾಗುವುದು. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ತಳಮಟ್ಟದಲ್ಲಿ ಸಾಧ್ಯವಾದಷ್ಟು ಹೆಚ್ಚು ಪದಾಧಿಕಾರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ” ಎಂದು ಸುರ್ಜೆವಾಲ ತಿಳಿಸಿದರು.