ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್
ಬೆಂಗಳೂರು: ಸಿದ್ದರಾಮಯ್ಯ ನೇತೇತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ಯಶಸ್ವಿಯಾಗಿರುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸರ್ಕಾರ ಸಿಕ್ಕಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಲೂಟಿ ಹಗರಣಗಳ ಪಟ್ಟಿಗೆ ಹೊಸ ಸೇರ್ಪಡೆ ಎಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ಆರೋಪಿಸಿದ್ದಾರೆ.
ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ. ತಮ್ಮ ಪಾಲಿನ ಶೇಕಡಾ 40 ಹಣ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂಬಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ವಿಬಿ ಜಿ – ರಾಮ್ ಜಿ” ಕಾಯ್ದೆ ವಿರುದ್ಧ ತಕರಾರು ತೆಗೆದಿದ್ದಾರೆ ಎಂದು ಟೀಕಿಸಿದರು.
ಈ ವಾಸ್ತವ ಸಂಗತಿ ಮರೆ ಮಾಚಿ, ಇಲ್ಲಸಲ್ಲದ ಆರೋಪ ಮಾಡಿ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಮಾಧ್ಯಮಗಳಿಗೆ ಜಾಹಿರಾತು ಬಿಡುಗಡೆ ಮಾಡಲಾಗಿದೆ. ಹಣದ ಕೊರತೆ ಎದುರಿಸುತ್ತಿದ್ದರೂ ಜನರ ತೆರಿಗೆ ಹಣವನ್ನು ಈ ರೀತಿ ರಾಜಕೀಯ ತೆವಲುಗಳಿಗೆ ಪೋಲು ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಮನರೇಗಾ ಯೋಜನೆಯನ್ನು ತೋಚಿದಂತೆ ಬಳಕೆ ಮಾಡಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿದ್ದರು. ಹೊಸ ಕಾಯ್ದೆ ಅದಕ್ಕೆಲ್ಲಾ ತೆರೆ ಎಳೆದಿದೆ. ಈಗ ಆಧುನಿಕತೆ ಸ್ಪರ್ಶದ ಜತೆ ಕಟ್ಟುನಿಟ್ಟಿನ ಹೊಸ ಕಾನೂನು ರೂಪಿಸಿದೆ. ಮಹತ್ಮಾ ಗಾಂಧಿ ಅವರ ಆಶಯದಂತೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳೊಂದಿಗೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ತಮ್ಮ ಲೂಟಿಗೆ ಅವಕಾಶ ತಪ್ಪಿ ಹೋಯಿತು ಮತ್ತು ಶೇಕಡಾ 40 ರಷ್ಟು ಹಣ ಭರಿಸಬೇಕು ಎಂಬ ಸಂಕಟದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ. ಹೀಗಾಗಿ ರಾಜ್ಯಪಾಲರ ಜತೆ ಕಾಲು ಕೆರೆದು ಜಗಳ ಮಾಡುವುದು, ಕೇಂದ್ರದ ವಿರುದ್ಧ ನಿರ್ಣಯ ಮಂಡಿಸುವ ನೆಪದಲ್ಲಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಆ ಹುನ್ನಾರಗಳಿಗೆ ಅವಕಾಶ ನೀಡದೆ ಜನತೆಗೆ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸದನದೊಳಗೆ ಬಿಜೆಪಿ ಹೋರಾಟ ಯಶಸ್ವಿಯಾಗಿದೆ ಎಂದರು.
