ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ; ಅಶೋಕ್ ವ್ಯಂಗ್ಯ

0
R Ashok - DKS - DK Shivakumar

ಬೆಂಗಳೂರು: ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್‌ನ ನುಂಗಣ್ಣಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ನಡೆದ 6,000 ಕೋಟಿ ರೂ. ಹಗರಣ ಸಂಬಂಧ ಐದು ದಾಖಲೆಗಳನ್ನು ಹಾಗೂ ಆಡಿಯೋ ದಾಖಲೆಗಳನ್ನು ನೀಡಿದ್ದೇನೆ. ಇಷ್ಟಾದರೂ ಸರ್ಕಾರ ಇನ್ನೂ ಸಾಕ್ಷಿ ಕೇಳುತ್ತಿದೆ. ಈ ಹಿಂದೆ 40 ಪರ್ಸೆಂಟ್‌ ಭ್ರಷ್ಟಾಚಾರವೆಂದು ಗುತ್ತಿಗೆದಾರರು ಹೇಳಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿತ್ತು. ಈಗ ಮದ್ಯ ಮಾರಾಟಗಾರರ ಸಂಘದವರು 80 ಪರ್ಸೆಂಟ್‌ ಭ್ರಷ್ಟಾಚಾರವೆಂದು ಹೇಳಿದ್ದು, ಆ ಬಗ್ಗೆ ರಾಹುಲ್‌ ಗಾಂಧಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯದೆ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಕೂಡ ಇದರಲ್ಲಿ ಭಾಗಿಯಾಗಿರುವುದರಿಂದ ಅವರು ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡಿ 6,000 ಕೋಟಿ ರೂ. ವಸೂಲಿ ಮಾಡಿ ಜನರ ಹಣ ಉಳಿಸುತ್ತೇವೆ ಎಂದರು.

ವಿಬಿ ಜಿ ರಾಮ್‌ ಜಿ ಯೋಜನೆಗೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ ಜಾಹೀರಾತು ನೀಡಿದ್ದೇವೆ. ಕಾಂಗ್ರೆಸ್‌ನಂತೆ ಸರ್ಕಾರದ ಹಣದಲ್ಲಿ ಜಾಹೀರಾತು ನೀಡಿಲ್ಲ. ಮಹಾತ್ಮ ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಮದ್ಯದಂಗಡಿಗಳನ್ನು ನಿರ್ಮಿಸಿ, ಅದರಲ್ಲಿ ಲೂಟಿ ಮಾಡಿದ್ದಾರೆ. ಗೋಹತ್ಯೆ ವಿರುದ್ಧ ಗಾಂಧೀಜಿ ಹೇಳಿದ್ದರೆ, ಕಾಂಗ್ರೆಸ್‌ ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ವಿರೋಧಿಸಿತ್ತು. ರಘುಪತಿ ರಾಘವ ರಾಜಾರಂ ಎಂದಿದ್ದ ಗಾಂಧೀಜಿಯವರ ಹೆಸರನ್ನು ಯೋಜನೆಗಳಿಗೆ ಇರಿಸುವ ಬದಲು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಹೆಸರನ್ನೇ ಇರಿಸಿದ್ದಾರೆ. ಕೇವಲ ಇವರ ಕುಟುಂಬದ ಹೆಸರನ್ನೇ ಎಲ್ಲಕ್ಕೂ ಇಟ್ಟಿದ್ದಾರೆ. 470 ಯೋಜನೆಗಳಲ್ಲಿ ಗಾಂಧೀಜಿ ಅಥವಾ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸರಿಲ್ಲ. ಇವರೆಲ್ಲರೂ ನಕಲಿ ಗಾಂಧಿಗಳು ಎಂದರು.

ಗಾಂಧೀಜಿ ಹೆಸರಿಟ್ಟು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಕಾಂಗ್ರೆಸ್‌ ನಾಯಕರು ಬೋಫೋರ್ಸ್‌ ಹೆಸರಿಟ್ಟಿದ್ದರು. ಹಾಗಾಗಿ ಗಾಂಧೀಜಿ ಕೋಲು ತೆಗೆದುಕೊಂಡಿದ್ದಾರೆ. ಕುಕ್ಕರ್‌ ಬಾಂಬ್‌ ಹಾಕಿದವನನ್ನು ಬ್ರದರ್ಸ್‌ಗಳು ಎಂದಿದ್ದಾರೆ. ಪಾಕಿಸ್ತಾನದಲ್ಲಿ ರಾಹುಲ್‌ ಗಾಂಧಿ ಎಂದರೆ ಅಪ್ಪಿಕೊಳ್ಳುತ್ತಾರೆ, ನರೇಂದ್ರ ಮೋದಿ ಎಂದರೆ ಕೆಂಡ ಕಾರುತ್ತಾರೆ. ಯಾರು ದೇಶಪ್ರೇಮಿ, ಯಾರು ಯಾರ ಪರ ಎಂದು ಇದರಿಂದಲೇ ಗೊತ್ತಾಗುತ್ತದೆ. ಕಾಂಗ್ರೆಸ್‌ ನಾಯಕರು ವಿದೇಶಕ್ಕೆ ಹೋಗಿ ಭಾರತವನ್ನು ಖಂಡಿಸುತ್ತಾರೆ. ಕಾಂಗ್ರೆಸ್‌ ಜನರ ಪಾಲಿಗೆ ಸತ್ತುಹೋಗಿದೆ ಎಂದರು.

Leave a Reply

Your email address will not be published. Required fields are marked *

You may have missed