ಕರ್ನಾಟಕದ ಹೆಮ್ಮೆಯ ‘ನಂದಿನಿ’ ಸಂಸ್ಥೆ ಮುಳುಗಿಸಲು ಬಿಜೆಪಿ ಪ್ರಯತ್ನ?

0

ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ‘ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಸುರೇಶ್, ‘ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿ ರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ಮುಸುಳಲು ಪ್ರಯತ್ನವಾಗುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಇಷ್ಟೋಂದು ಕೀಳು ಮನೋಭಾವನೆಯೇ? ಕನ್ನಡಿಗರು, ಕನ್ನಡದ ರೈತರು ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ಖಾಸಗಿ ಕ್ಷೇತ್ರ ಹೊಂದಿದ್ದ ರಾಜ್ಯ ಕರ್ನಾಟಕ. ನಂತರದ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಕರ್ನಾಟಕ. ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಆರಂಭಿಸಿದ್ದವರು ಕನ್ನಡಿಗರು ಎಂದರು.

ದೇಶದಲ್ಲಿ ಸಹಕಾರಿ ಚಳುವಳಿ ಮೂಲಕ ಅತ್ಯುತ್ತಮವಾದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಬ್ಯಾಂಕುಗಳನ್ನು ಕರ್ನಾಟಕ ಸ್ಥಾಪಿಸಿತ್ತು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ ಎಂದರು.

ಸಹಕಾರಿ ಬ್ಯಾಂಕುಗಳಿಲ್ಲದಿದ್ದರೆ ರೈತರಿಗೆ ಬಡಿರಹಿತ ಸಾಲ ಸುಲಭವಾಗಿ ಸಿಗುವುದಿಲ್ಲ. ರೈತರ ಬದುಕು ಸುಧಾರಿಸಬೇಕು ಎಂದು ಕೃಷಿ ಜತೆಗೆ ಕೃಷಿಯ ಇತರೆ ಚಟುವಟಿಕೆಗಳನ್ನು ಮಾಡಬೇಕಾಗಿದೆ ಎಂದ ಡಿ.ಕೆ.ಸುರೇಶ್, ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿಕೊಂಡು ಬದುಕುತ್ತಿದ್ದಾರೆ ಎಂದರು.

ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಮೂಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಮಾಡುತ್ತಿದ್ದಾರೆ. ಅಮೂಲ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಂಸ್ಥೆ ಮೇಲೆ ಮೇಲೆ ಸಾಕಷ್ಟು ಗೌರವವೂ ಇದೆ. ಆದರೆ ಕನ್ನಡಿಗರು, ಕೆಎಂಎಫ್ ಗುಜರಾತಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಯಾವ ಅನ್ಯಾಯ ಮಾಡಿದೆ ಎಂದು ಈ ರೀತಿ ಷಡ್ಯಂತ್ರ ರೂಪಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದ ಅವರು, ಸಹಕಾರ ಎಂದರೆ ಒಬ್ಬರಿಗೊಬ್ಬರು ಕೈಜೋಡಿಸಿ ಬೆಂಬಲ ನೀಡುವುದು, ಬಾಂದವ್ಯ ಸೃಷ್ಟಿಸುವುದು. ಒಂದು ರಾಜ್ಯದ ಸಹಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ನಡೆಸುವುದರ ಜತೆಗೆ ಬೇರೊಂದು ರಾಜ್ಯದ ಸಹಕಾರಿ ಸಂಸ್ಥೆ ಜತೆಗೆ ಸ್ಪರ್ಧೆ ಮಾಡಬೇಕಾ? ಬೇರೆ ರಾಜ್ಯದ ಸಹಕಾರ ಸಂಸ್ಥೆ ಕನ್ನಡಿಗರು ಕಟ್ಟಿ ಬೆಳೆಸಿರುವ ಸಂಸ್ಥೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾ? ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರೂ ಆಲೋಚನೆ ಮಾಡಬೇಕಾದ ವಿಚಾರ ಎಂದರು.

ಮೋದಿ ಅವರು ಬಂದ ನಂತರ ಸಾರ್ವಜನಿಕ ವಲಯಗಳ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಿ ಆಗಿದೆ. ನಂತರ ಕರ್ನಾಟಕದ ಬ್ಯಾಂಕುಗಳಾದ ಸಿಂಡಿಕೇಟ್, ಕೆನರಾ, ವಿಜಯಾ ಹಾಗೂ ಕಾರ್ಪೋರೇಷನ್ ಬ್ಯಾಂಕುಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಲಾಗಿದೆ. ಕೆನರಾ ಎಂಬ ಹೆಸರನ್ನು ನಮ್ಮ ಕರಾವಳಿ ಭಾಗದ ಜನ ಬಹಳ ಹೆಮ್ಮೆಯಿಂದ ಬಳಸುತ್ತಾರೆ. ಇಂತಹ ಹೆಸರಿನ ಬ್ಯಾಂಕ್ ಅನ್ನು ಬಿಜೆಪಿ ಸಂಸದರು ಹೇಗೆ ಬಿಟ್ಟುಕೊಟ್ಟರು ಎಂಬುದು ಅರ್ಥವಾಗುತ್ತಿಲ್ಲ ಎಂದವರು ಹೇಳಿದರು.

ಈಗ ಇವರು ನಮ್ಮ ನಂದಿನಿ ಸಂಸ್ಥೆ ಮೇಲೆ ಕಣ್ಣಿಟ್ಟಿದ್ದು, ಇದನ್ನು ನುಂಗಲು ಕಾಯುತ್ತಿದ್ದಾರೆ. ನಂದಿನಿ ಉತ್ಪನ್ನ ತನ್ನ ಗುಣಮಟ್ಟದಿಂದ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಹಾಲು ಉತ್ಪಾದನೆಯಲ್ಲಿ ನಾವು ನಂದಿನಿ ಮೂಲಕ ಸ್ವಾವಲಂಬನೆ ಸಾಧಿಸಿದ್ದೇವೆ. ಈ ಮಧ್ಯೆ ಅಮೂಲ್ ಅನ್ನು ರಾಜ್ಯದಲ್ಲಿ ಬಿಟ್ಟು ಏನನ್ನು ಸಾಧಿಸಲು ಮುಂದಾಗಿದ್ದಾರೆ? ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕೋವಿಡ್ ಸಂದರ್ಭದಲ್ಲಿ ಬರಲಿಲ್ಲ. ಈಗ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಂದು ನಮ್ಮ ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸಹಕಾರ ಇಲಾಖೆ ಆರಂಭಿಸಿ, ಕೆಎಂಎಫ್ ನಲ್ಲಿ ಯಾವ ಲೋಪ ಕಂಡು ಕೇಂದ್ರ ಸರ್ಕಾರ ನಂದಿನಿ ಮೇಲೆ ದಬ್ಬಾಳಿಕೆ ನಡೆಸುತ್ತಿದೆ? ನಂದಿನಿ ಸಂಸ್ಥೆ ಮೂಲಕ 160 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಸರ್ಕಾರ ರಾಜ್ಯದಲ್ಲಿ ಕೃತಕವಾಗಿ ಹಾಲಿನ ಕೊರತೆ ಸೃಷ್ಟಿಸುತ್ತಿರುವುದೇಕೆ? ನಮ್ಮಲ್ಲಿ ಹಾಲಿಗೆ ಯಾವುದೇ ಅಭಾವವಿಲ್ಲ. ಈ ರಾಜ್ಯದಲ್ಲಿ ಎಂದಿಗೂ ಹಾಲಿನ ಕೊರತೆ ಇರಲಿಲ್ಲ. ಕೇಂದ್ರ ಸಹಕಾರಿ ಸಚಿವರು ಯಾವತ್ತೂ ನಮ್ಮ ಹಾಲು ಸಹಕಾರ ಸಂಸ್ಥೆ ಮೇಲೆ ಕಣ್ಣು ಇಟ್ಟರೋ ಅಂದಿನಿಂದ ರಾಜ್ಯದಲ್ಲಿ ಹಾಲಿನ ಅಭಾವ ಸೃಷ್ಟಿಯಾಗಿದೆ. ಅಂದಿನಿಂದ ನಿಂದಿನಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿ, ನಂದಿನಿಯನ್ನು ಮುಳುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಗ್ರಾಹಕರು ಹಾಗೂ ರೈತರ ದೃಷ್ಟಿಯಿಂದ ಹಾಲಿನ ದರವನ್ನು 37 ರೂ. ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಅದೇ ಹಾಲನ್ನು 54-60 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ 45 ವರ್ಷಗಳಲ್ಲಿ ನಮ್ಮ ಹಾಲಿನ ಗುಣಮಟ್ಟದಲ್ಲಿ ಎಂದಾದರೂ ಕೊರತೆ ಎದುರಾಗಿದೆಯಾ? ಬೆಲೆ ಏರಿಕೆಯನ್ನು ತಡೆಯಲಾಗದ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಬೇರೆಯವರನ್ನು ಕರೆತಂದು ಕ್ಷೀರ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಮಾಡುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ಸಹಕಾರಿ ಸಚಿವರುಗಳ ಬಳಿ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ. ಹೆಚ್ಚಾಗಿ ನೀಡುವಂತೆ ಕೇಳಿದರು. ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಕೇಂದ್ರ ನಾಯಕರ ಓಲೈಸಲು ಈ ಸರ್ಕಾರ, ನಮ್ಮ ಸಂಸ್ಥೆ ಮುಳುಗಿಸಿ ಬೇರೆಯವರು ರಾಜ್ಯದ ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ರೈತರನ್ನು ಬಲಿ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿಯವರು ವ್ಯಾಪಾರಸ್ಥರು ಎಂಬುದು ಗೊತ್ತಿದೆ. ಅವರು ವ್ಯಾಪಾರ ಮಾಡದೇ ಇರುವ ವಿಚಾರವೇ ಇಲ್ಲ. ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡೆ ಅಧಿಕಾರ ಮಾಡುತ್ತಿದ್ದಾರೆ. ಇಡೀ ವ್ಯವಸ್ಥೆ ವ್ಯಾಪಾರಿಕರಣ ಮಾಡಿ, ತೆರಿಗೆ ಮೇಲೆ ತೆರಿಗೆ ಹಾಕಲಾಗಿದೆ. ರೈತರಿಗೆ ಸ್ವಾವಲಂಬನೆಯ ಬದುಕು ನೀಡಲಾಗದೆ, ಎಲ್ಲವನ್ನು ತಮ್ಮ ಹಿಡಿತಕ್ಕೆ ತೆಗೆದುಕಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯೇ? ಕನ್ನಡಿಗರು ಯಾವ ಅನ್ಯಾಯ ಮಾಡಿದ್ದಾರೆ ಎಂದು ಈ ರೀತಿ ಮಾಡುತ್ತಿದ್ದಾರೆ?

ಜಿಎಸ್ ಟಿ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳಲು ಕರ್ನಾಟಕ ಬೇಕು, ಆದರೆ ಈ ರಾಜ್ಯದ ಹಿತಾಸಕ್ತಿ ಮಾತ್ರ ಕಾಪಾಡಲು ಆಸಕ್ತಿ ಇಲ್ಲ. ಈ ರಾಜ್ಯವನ್ನು ಕೇವಲ 40% ಕಮಿಷನ್ ಪಡೆಯಲು ಮಾತ್ರ ಸೀಮಿತಗೊಳಿಸಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ, ರೈತರು ಆತ್ಮಹತ್ಯೆಗೆ ಮುಂದಾದರೆ ಅದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿ ಗೊಂದಲ ಸೃಷ್ಟಿಸಿ ಖಾಸಗೀಕರಣ ಮಾಡಲು ಮುಂದಾಗಿದೆ. ಬಿಜೆಪಿಯವರು ವಿಮಾನ ನಿಲ್ದಾಣ, ರೈಲ್ವೇ, ಬಂದರು, ವಿಮಾ ಕಂಪನಿ ಎಲ್ಲವನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ. ದಯಮಾಡಿ ಕನ್ನಡಿಗರ ನಂದಿನಿ ಸಂಸ್ಥೆಯನ್ನು ಮಾರಾಟಕ್ಕೆ ಇಡಬೇಡಿ. ರೈತರು ಈ ಸಂದರ್ಭದಲ್ಲಿ ಎಚ್ಛೆತ್ತುಕೊಳ್ಳದಿದ್ದರೆ ಕರ್ನಾಟಕವನ್ನು ಇವರು ಒಂದಲ್ಲಾ ಒಂದು ದಿನ ತಮಗೆ ಬೇಕಾದವರಿಗೆ ಮಾರಾಟ ಮಾಡುತ್ತಾರೆ.

ಈ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಗೌರವ ಇದ್ದರೆ, ಸಿಆರ್ ಪಿಎಫ್ ನಲ್ಲಿ 1.50 ಲಕ್ಷ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ. ಅದನ್ನು ಬಿಟ್ಟು ಮತ ಹಾಕಿಸಿಕೊಂಡು ದಾರಿತಪ್ಪಿಸಬೇಡಿ.

ನೀವು ನರೇಂದ್ರ ಮೋದಿ ಅವರನ್ನು ಬ್ರಾಂಡ್ ಅಅಂಬಾಸಿಡರ್ ಆಗಿ ತೋರಿಸುವುದೇ ಆದರೆ, ಈ ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೂ ನರೇಂದ್ರ ಮೋದಿ ಅವರೇ ಕಾರಣ ಎಂಬುದನ್ನು ಸ್ಪಷ್ಟಪಡಿಸಿ.

*ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್:*

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲವನ್ನೂ ಪೂರ್ವಯೋಜಿತವಾಗಿ ಮಾಡುತ್ತಿದೆ. ಇವರ ಮುಂದಿನ ಗುರಿ ನಂದಿನಿ ಸಂಸ್ಥೆಯಾಗಿದೆ.

ಸಿಆರ್ ಪಿಎಫ್ ದೇಶದಲ್ಲಿ 1.30 ಲಕ್ಷಕ್ಕೂ ಹೆಚ್ಚು ಕಾನ್ಸ್ಟೇಬಲ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ 466 ಕಾನ್ಸ್ಟೇಬಲ್ ನೇಮಕ ಮಾಡಬೇಕಿದೆ. ಈ ಹುದ್ದೆ ಪಡೆಯಬೇಕಾದರೆ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು. ಅಮಿತ್ ಶಾ ಅವರೇ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುತ್ತಿಲ್ಲ ಯಾಕೆ? ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಮೂಲತತ್ವಕ್ಕೆ ಧಕ್ಕೆ ತರುತ್ತಿರುವುದೇಕೆ? ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವುದೇಕೆ?

ಈ ಅಧಿಸೂಚನೆ ಪರಿಶೀಲಿಸಿದರೆ, ಇದರಲ್ಲಿ 125 ಅಂಕಗಳಿಗೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಉತ್ತರಿಸಬೇಕು. ಉಳಿದ ಕಂಪ್ಯೂಟರ್ ಪರೀಕ್ಷೆಗಳು ಕೂಡ ಈ ಎರಡು ಭಾಷೆಯಲ್ಲಿ ಮಾತ್ರ ಬರೆಯಬೇಕು.

ಮುಂದಿನ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ನಂದಿನಿ ಸಂಸ್ಥೆ ಗುರಿಯಾಗಿಸುವುದಾಗಲಿ, ಅಥವಾ ಕೇಂದ್ರದ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನ್ಯಾಯ ಮಾಡಿದರೆ ರಾಜ್ಯದ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಕರ್ನಾಟಕದಿಂದ ಆಯ್ಕೆಯಾಗಿರುವ 25 ಸಂಸದರು ನಂದಿನಿ ಸಂಸ್ಥೆ ವಿರುದ್ಧದ ಪಿತೂರಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಉದ್ದೇಶವಾದರೂ ಏನು? ಈ ಅನ್ಯಾಯದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸುವ ಧೈರ್ಯ ಯಾವ ಬಿಜೆಪಿ ಸಂಸದರಿಗೂ ಇಲ್ಲವಾಗಿದೆ.

Leave a Reply

Your email address will not be published. Required fields are marked *

You may have missed