ಕಂಡಕ್ಟರ್ ವಿರುದ್ಧ ಸುಳ್ಳು ಪೋಕ್ಸೋ ಕೇಸ್: ಸಚಿವ ರಾಮಲಿಂಗ ರೆಡ್ಡಿ ಗರಂ; KSRTC ಸಿಬ್ಬಂದಿ ರಕ್ಷಣೆಗೆ ನಾನಿದ್ದೇನೆ ಎಂದ ಸಾರಿಗೆ ಮಂತ್ರಿ..

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಕಂಡಕ್ಟರ್ ವಿರುದ್ಧ ವಿರುದ್ಧ ದಾಖಲಾಗಿರುವ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. KSRTC ನೌಕರರ ಪರವಾಗಿ ನಿಂತಿರುವ ಸಚಿವರು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ KSRTC ಸಿಬ್ಬಂದಿ ಮೇಲಿನ ದಾಳಿ ಹಾಗೂ ನಿರ್ವಾಹಕರ ವಿರುದ್ಧ ದಾಖಲಾಗಿರುವ ಪ್ರಕರಣ ಬಗ್ಗೆ ಕಳವಳ ವ್ಯಕತಪಡಿಸಿರುವ ಸಚಿವ ರಾಮಲಿಂಗ ರೆಡ್ಡಿ. ಕಂಡಕ್ಟರ್ ವಿರುದ್ಧದ ಪೋಕ್ಸೊ ಆರೋಪಗಳು ಸುಳ್ಳು ಎಂದು ಹೇಳಿದರು.
ಪ್ರಯಾಣಿಕರ ಗುಂಪೊಂದು ಕನ್ನಡದಲ್ಲಿ ಮಾತನಾಡಲು ಕೇಳಿದ್ದಕ್ಕಾಗಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಕಂಡಕ್ಟರ್ ಪೊಲೀಸ್ ದೂರು ದಾಖಲಿಸಿದ್ದರೆ, ಅಪ್ರಾಪ್ತ ಬಾಲಕಿ ಕಂಡಕ್ಟರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಘಟನೆಯ ನಂತರ, ಅವರು ಕಂಡಕ್ಟರ್ ವಿರುದ್ಧ ಪೋಕ್ಸೊ ದೂರು ದಾಖಲಿಸಿದ್ದಾರೆ. ಇದು ಸಂಪೂರ್ಣ ಸುಳ್ಳು ಪ್ರಕರಣ ಎಂದವರು ಹೇಳಿದರು.
ಭೂಮಿ, ನೀರು ಮತ್ತು ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಾಮರಸ್ಯ ಕೆಡಿಸಲು ಪ್ರಯತ್ನಿಸಿದವರನ್ನು ಗಡೀಪಾರು ಮಾಡಬೇಕು. ಈ ರೀತಿಯ ಘಟನೆಗಳು ನಡೆಯಬಾರದು. ಅಂತಹ ಚಟುವಟಿಕೆಗಳಲ್ಲಿ ತೊಡಗುವವರನ್ನು ಗಡಿಪಾರು ಮಾಡಬೇಕು ಎಂದು ಸಚಿವ ರೆಡ್ಡಿ ಹೇಳಿದರು.
‘ಗೃಹ ಸಚಿವ ಪರಮೇಶ್ವರ, ಬೆಳಗಾವಿ ಪೊಲೀಸ್ ಆಯುಕ್ತ, ಎಸ್‌ಪಿ ಮತ್ತು ಕೆಎಸ್‌ಆರ್‌ಟಿಸಿ ಎಂಡಿ ಜೊತೆ ಚರ್ಚಿಸಿದ್ದೇನೆ. ಕಂಡಕ್ಟರ್ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವು ಸುಳ್ಳುಪ್ರಕರಣವಾಗಿದೆ. ಅದಕ್ಕೆ ಯಾವುದೇ ಪ್ರಾಮುಖ್ಯತೆ ನೀಡಬಾರದು. ಕಂಡಕ್ಟರ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಂತೆ ನಾನು ಖಚಿತಪಡಿಸಿಕೊಳ್ಳುತ್ತೇನೆ. ಸ್ಥಳೀಯ ಸಂಸ್ಥೆಗಳು ಅವರಿಗೆ ಬೆಂಬಲ ನೀಡಿವೆ. ಇದು ಅವರಿಗೆ ನೈತಿಕ ಧೈರ್ಯವನ್ನು ನೀಡುತ್ತದೆ’ ಎಂದು ಸಚಿವರು ತಿಳಿಸಿದರು.