ಎಲ್ಲೆಡೆ ಅರ್ಜಿ ಹಾಕುವ ನಿರಾಣಿ ಕರಾವಳಿಗೆ ಯಾಕೋ ಅರ್ಜಿ ಹಾಕಿಲ್ಲ?
ಉಡುಪಿ: ಪ್ರಮೋದ್ ಮಧ್ವರಾಜ್ ಅವರಿಗೆ ಎಲ್ಲದನ್ನೂ ನೀಡಿದೆವು. ಆದರೆ ಅವರು ಕಾಂಗ್ರೆಸ್‌ಗೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ. ಶಿವಕುಮಾರ್, ನಾನು ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಕಾರಣ, ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಜತೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ತಂದೆ, ತಾಯಿ ಹಾಗೂ ಮಗನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತ್ತು. ಇದಕ್ಕಿಂತ ಹೆಚ್ಚಿನದನ್ನು ಕಾಂಗ್ರೆಸ್ ಏನು ನೀಡಲು ಸಾಧ್ಯ? 2023ರ ಚುನಾವಣೆಯಲ್ಲಿ ಆತ ಯಾವುದೇ ಪಕ್ಷದಿಂದ ನಿಂತರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ಆತನನ್ನು ಸೋಲಿಸುವ ಕೆಲಸ ಮಾಡಬೇಕು. ಆತ ನಮ್ಮ ಪಕ್ಷದಲ್ಲಿದ್ದಾಗ ವೇದಿಕೆ ಮೇಲೆ ಕೂರುತ್ತಿದ್ದರು. ಈಗ ಬಿಜೆಪಿಗೆ ಹೋಗಿ ಕೆಳಗೆ ಕೂರುವ ಸ್ಥಿತಿ ಬಂದಿದೆ ಎಂದರು.
ನಾವಿಂದು ಕೃಷ್ಣನ ಪಾದಕ್ಕೆ ಬಂದಿದ್ದೇವೆ. ನಾರಾಯಣ ಗುರುಗಳ ಭೂಮಿಗೆ ಬಂದಿದ್ದೇವೆ. ಈ ಪ್ರದೇಶಕ್ಕೆ ಅದರದೇ ಆದ ಇತಿಹಾಸವಿದೆ. ಈ ಎರಡು ಜಿಲ್ಲೆ ಅತಿ ಹೆಚ್ಚು ವಿದ್ಯಾವಂತ, ಬುದ್ದಿವಂತರಿರುವ ಜಿಲ್ಲೆ. ಈ ದೇಶಕ್ಕೆ ಆರ್ಥಿಕವಾಗಿ ಶಕ್ತಿ ನೀಡಿರುವ ಜಿಲ್ಲೆ. ಉಡುಪಿಯ ಒಂದು ಪಂಚಾಯ್ತಿಯಲ್ಲಿ 3 ಮೆಡಿಕಲ್ ಕಾಲೇಜು ಇದ್ದು, ಅಷ್ಟರ ಮಟ್ಟಿಗೆ ಶೈಕ್ಷಣಿಕವಾಗಿ ಬೆಳೆಸಲಾಗಿದೆ ಎಂದರು.
ಆಸ್ಕರ್ ಫರ್ನಾಂಡೀಸ್ ಅವರು ಈ ಭಾಗದಲ್ಲಿ ಒಂದು ಕಾರ್ಖಾನೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಸಹಾಯ ಮಾಡಿದ್ದೆ. ಈಗ ಎಲ್ಲವನ್ನು ಮಾರಿಕೊಂಡು ಸ್ಕ್ರಾಪ್ ಮಾರಲು ಮುಂದಾಗಿದ್ದಾರಂತೆ. ಎಲ್ಲೆಡೆ ಅರ್ಜಿ ಹಾಕುವ ನಿರಾಣಿ ಅವರು ಇಲ್ಲಿಗೆ ಯಾಕೋ ಅರ್ಜಿ ಹಾಕಿಲ್ಲ. ಇದು ಬಿಜೆಪಿಯ ವ್ಯವಹಾರ ಎಂದವರು ಟೀಕಿಸಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಅವರು 600 ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ಆದಾಯ ಡಬಲ್ ಮಾಡುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಈ ಭಾಗದ ಮೀನುಗಾರರಿಗೆ ಏನೆಲ್ಲಾ ಮಾತು ಕೊಟ್ಟಿದ್ದರು, ಯಾವುದನ್ನೂ ಈಡೇರಿಸಿಲ್ಲ. ಈ ಭಾಗದ ಮೀನುಗಾರರು ನನಗೆ ಒಂದು ಮನವಿ ನೀಡಿದ್ದಾರೆ. ಅವರು ಸೀಮೆಎಣ್ಣೆ ಕೇಳುತ್ತಿದ್ದಾರೆ. ಈಗ ನೀಡಲಾಗುತ್ತಿರುವ 300 ಲೀಟರ್ ಸೀಮೆಎಣ್ಣೆ ಅನ್ನು 500 ಲೀಟರ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಈಗಿನ ಸರ್ಕಾರ ಕೇವಲ 75 ಲೀಟರ್ ನೀಡಲು ಮುಂದಾಗಿದೆ. ಇಂತಹ 10 ಬೇಡಿಕೆಗಳನ್ನು ಅವರು ನಮಗೆ ನೀಡಿದ್ದಾರೆ. ಇವುಗಳನ್ನು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.
ಇತ್ತೀಚೆಗೆ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ 10 ಲಕ್ಷ ಕೋಟಿ ಹೂಡಿಕೆ ಬಂದಿದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸದಾನಂದ ಗೌಡರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಈ 10 ಲಕ್ಷ ಕೋಟಿ ಬಂಡವಾಳದಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ಹೂಡಿಕೆ ಮಾಡಲು ಎಷ್ಟು ಹಣ ಬಂದಿದೆ? ಎಂದು. ನಿಮ್ಮ ಆಡಳಿತ ನೋಡಿ ಯಾರೊಬ್ಬರೂ ಈ ಭಾಗಗಳಲ್ಲಿ 1 ಲಕ್ಷ ಕೋಟಿ ಬಂಡವಾಳ ಹಾಕಲು ಯಾರೂ ಮುಂದೆ ಬಂದಿಲ್ಲ. ಅದಕ್ಕೆ ಕಾರಣ ನೀವು ಜನರ ಭಾವನೆ ಜತೆ ಆಟವಾಡುತ್ತಿರುವುದು ಎಂದು ಡಿಕೆಶಿ ಅವರು ಬಿಜೆಪಿ ಸರ್ಕಾರವನ್ನು ತರಾಟಗ ತೆಗೆದುಕೊಂಡರು.