ಬೆಂಗಳೂರು: ಎಚ್ಎಂಟಿಗೆ ಜಾಗ ನೀಡಿದ್ದೇ ಕಾಂಗ್ರೆಸ್‌ ಸರ್ಕಾರ. ಹಾಗಿರುವಾಗ ಅದು ಅರಣ್ಯ ಭೂಮಿಯಾಗಲು ಹೇಗೆ ಸಾಧ್ಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಿಂದ 65 ಎಕರೆ ಜಾಗವನ್ನು ಎಚ್ಎಂಟಿಗೆ ನೀಡಿದ್ದೆವು. ಈಗ ಆ ಜಾಗದಲ್ಲಿ ಅರಣ್ಯ ನಾಶವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇದು ಅರಣ್ಯ ಭೂಮಿ ಎನ್ನುವುದಾದರೆ, ಇದನ್ನು ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.

ಎಚ್ಎಂಟಿ ಕಾರ್ಖಾನೆಯನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದ್ಘಾಟಿಸಿದ್ದರು‌. ಅವರೇ ಜಾಗ ನೀಡಿ, ಈಗ ಅದು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೂ ಅದು ಎಚ್ಎಂಟಿಗೆ ಸೇರಿತ್ತು. ಈಗ ಇವರು ಮಾಜಿ ಪ್ರಧಾನಿ ನೆಹರು ವಿರುದ್ಧ ಪ್ರಕರಣ ದಾಖಲಿಸುತ್ತಾರಾ? ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸುತ್ತಾರಾ? ಎಂದು ಅಶೋಕ್ ಪ್ರಶ್ನಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿ ಮಾಡಲು ಈ ರೀತಿ ಮಾಡಬಾರದು. ಅರಣ್ಯ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ನೀಡಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಭೂ ಕಬಳಿಕೆ ಆರೋಪ ಮಾಡಬೇಕಾಗುತ್ತದೆ ಎಂದರು.

You may have missed