‘ಉರಿಗೌಡ ನಂಜೇಗೌಡ ಹೆಸರಲ್ಲಿ ಬಿಜೆಪಿ ಒಕ್ಕಲಿಗರ ಇತಿಹಾಸ ತಿರುಚುತ್ತಿದ್ದಾರೆ’; ಡಿಕೆಶಿ ಆಕ್ರೋಶ

0

ಬೆಳಗಾವಿ: ಉರಿಗೌಡ ನಂಜೇಗೌಡ ಹೆಸರು ಬಿಜೆಪಿಯ ಸೃಷ್ಟಿಯಾಗಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇತಿಹಾಸ ತಿರುಚುವಲ್ಲಿ ಬಿಜೆಪಿಯವರದು ಎತ್ತಿದ ಕೈ ಎಂದು ಬಣ್ಣಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಇತಿಹಾಸ ತಿರಿಚಿದ್ದ ಬಿಜೆಪಿ, ಈಗ ಉರಿಗೌಡ ನಂಜೇಗೌಡ ಎಂಬ ಹೆಸರಲ್ಲಿ ಒಕ್ಕಲಿಗರ ಇತಿಹಾಸ ತಿರುಚುತ್ತಿದ್ದಾರೆ ಎಂದು ಕೆಣಕಿದ್ದಾರೆ.

ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಸತ್ತು ಎರಡು ಶತಮಾನಗಳೇ ಕಳೆದಿವೆ. ಈಗ ಊರಿಗೌಡ, ನಂಜೇಗೌಡರನ್ನು ಬಿಜೆಪಿ ಸೃಷ್ಟಿಸಿದೆ ಎಂದ ಅವರು, ಮಂಡ್ಯ ಜಿಲ್ಲೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಾ. ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ‘ಸುವರ್ಣ ಮಂಡ್ಯ ‘ ಎಂಬ ಸಂಚಿಕೆ ತರಲಾಗಿತ್ತು ಎಂದವರು ಹೇಳಿದರು.

ಅದರ ಪರಿಸ್ಕೃತ ಸಂಚಿಕೆಯಲ್ಲಿ ಸಂಶೋಧಕ ಹ.ಕ. ರಾಜೇಗೌಡರು *ಮಂಡ್ಯ ಐವತ್ತು; ಒಂದು ಪಕ್ಷಿ ನೋಟ* ಎಂಬ ಲೇಖನ ಬರೆದಿದ್ದರು ಎಂದು ಬೆಳಕು ಚೆಲ್ಲಿದ ಡಿಕೆಶಿ, ಅದರಲ್ಲಿ ದೊಡ್ಡನಂಜೆಗೌಡ, ಉರಿಗೌಡ ಎಂಬುವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖಿಸಿದ್ದರು ಎಂದು ವಿಶ್ಲೇಷಿಸದರು.

ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ ಮಾಡಿರುವ ಬಗ್ಗೆ ಕೆಲವರು ರಾಜೇಗೌಡರನ್ನು ಪ್ರಶ್ನೆ ಮಾಡಿದಾಗ ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂದು ಹೀಗೆ ಬರೆದಿದ್ದೇನೆ, ಇರಲಿ ಬಿಡಿ ಎಂದು ಹೇಳಿದ್ದಾರೆ ಎಂದ ಅವರು, ಈ ವಿಚಾರವಾಗಿ ಸ್ಪಷ್ಟನೆ ನೀಡಲು ಈಗ ಹ.ಕ. ರಾಜೇಗೌಡರು ಜೀವಂತವಾಗಿ ಇಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ ಎಂದು ಟೀಕಿಸಿದರು.

ಅನೇಕ ಇತಿಹಾಸ ತಜ್ಞರು, ಸಂಶೋಧಕರು ಉರಿಗೌಡ, ನಂಜೇಗೌಡ ಕೇವಲ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದರೂ ಬಿಜೆಪಿಯವರು ಮಾತ್ರ ಇದನ್ನು ಬಿಡಲು ರೆಡಿ ಇಲ್ಲ. ಇತಿಹಾಸದ ಯಾವ ದಾಖಲೆಯಲ್ಲಿ ಉರಿಗೌಡ ನಂಜೇಗೌಡ ಟಿಪ್ಪು ಸುಲ್ತಾನ್ ಕೊಂದರು ಎಂಬುದು ಇದೆ ನೀವೇ ಹೇಳಿ ನೋಡೋಣ ಎಂದ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು, ಆ ಮೂಲಕ ಒಕ್ಕಲಿಗರು ದೇಶವಿರೋಧಿಗಳು, ಕೊಲೆಗಡುಕರು ಎಂದು ಅವರ ಗೌರವ, ಸ್ವಾಭಿಮಾನಕ್ಕೆ ಮಸಿ ಬಳಿಯಲಾಗುತ್ತಿದೆ ಎಂದು ದೂರಿದರು.

ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಸೃಷ್ಟಿಸುತ್ತಾರೆ, ಯಾರ ಮನೆಯನ್ನು ಬೇಕಾದರೂ ಹಾಳು ಮಾಡುತ್ತಾರೆ ಎಂದು ಸಿಟ್ಟು ಹೊರಹಾಕಿದ ಡಿಕೆಶಿ, ಸಿ.ಟಿ ರವಿ ಹಾಗೂ ಅಶ್ವತ್ ನಾರಾಯಣ್ ಎಂಬ ಅವಿವೇಕಿಗಳು ಈ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ದೂರಿದರು.

ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಚಿವ ಅಶ್ವತ್ ನಾರಾಯಣ ಅವರು ಚಿತ್ರಕತೆ ಬರೆಯುತ್ತಾರಂತೆ. ಇವರಿಗೆ ಪಾಠ ಮಾಡಿದ ಶಿಕ್ಷಕರೇ ನಾವು ಇವರಿಗೆ ಈ ವಿಚಾರ ಹೇಳುಕೊಟ್ಟಿಲ್ಲದ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಡಿಸಿದ್ದಾರೆ.

ಟಿಪ್ಪು ಇತಿಹಾಸದ ಬಗ್ಗೆ ರಾಷ್ಟ್ರಪತಿಗಳು ರಾಜ್ಯ ವಿಧಾನಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟಿಪ್ಪು ಬದುಕು, ಸಾವು, ಸಾಧನೆ ಬಗ್ಗೆ ಹಲವು ಇತಿಹಾಸ ಪುಸ್ತಕಗಳಿವೆ. ಅವುಗಳಲ್ಲಿ ಇಲ್ಲದ ವಿಚಾರವನ್ನು ಇವರು ಸೃಷ್ಟಿಸಿದ್ದಾರೆ. ಒಕ್ಕಲಿಗ ಸಮುದಾಯದ ಹೆಸರನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುತ್ತಿರುವ ಇವರು ಈಗ ಅದೇ ಸಮಾಜದ ಸ್ವಾಭಿಮಾನ ಹಾಗೂ ಘನತೆಗೆ ಮಸಿ ಬಳಿಯುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಲವು ಸಂಘಟನೆಗಳು ನನಗೆ ಒತ್ತಡ ಹೇರುತ್ತಿದ್ದು, ಇತಿಹಾಸ ತಿರುಚುವ ಈ ಷಡ್ಯಂತ್ರ ಖಂಡಿಸಿ, ಅದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದವರು ಹೇಳಿದರು.

ಈ ಹೋರಾಟಕ್ಕೆ ಒಕ್ಕಲಿಗ ಸಮುದಾಯದ ಮಾರ್ಗದರ್ಶಕರು, ತಿಲಕಪ್ರಾಯರಾದ ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದ ಅವರು, ಸ್ವಾಮೀಜಿಗಳು ಈ ಹೋರಾಟದ ನೇತೃತ್ವ ವಹಿಸಬೇಕು, ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಕರೆದು ಹೋರಾಟದ ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಬೇಕು. ಸ್ವಾಮೀಜಿಗಳು ಈ ವಿಚಾರದಲ್ಲಿ ಯಾರ ಜತೆಗೂ ಸಂದಾನ ಮಾಡಿಕೊಳ್ಳಬಾರದು. ಅವರು ಸಂದಾನಕ್ಕೆ ಕರೆದರೂ ಅದಕ್ಕೆ ಹೋಗಬಾರದು. ಒಂದು ವೇಳೆ ಸಂದಾನಕ್ಕೆ ಮುಂದಾದರೆ ಈ ಒಕ್ಕಲಿಗ ಸಮಾಜಕ್ಕೆ ಅಗೌರವ ಮಾಡಿದಂತೆ ಆಗುತ್ತದೆ ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

You may have missed