ಈಗ ದಾಖಲೆಯ ತಾಪಮಾನ; ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ನಿರೀಕ್ಷೆ

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಮುಂಗಾರು ಹಂಗಾಮಕ್ಕೂ ಮುನ್ನವೇ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಗಮನಸೆಳೆದಿದ್ದಾರೆ.
2025ನೇ ಸಾಲಿನ ಹಿಂಗಾರು -ಮುಂಗಾರು ಮಳೆ ಸ್ಥಿತಿ, ಕೃಷಿ, ಕುಡಿಯುವ ನೀರು, ಹವಾಮಾನ ಹಾಗೂ ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಕುರಿತು ಗುರುವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.
ಈ ಫೆಬ್ರವರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.