‘ಆರ್‌ಎಸ್‌ಎಸ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಲಿಲ್ಲ’; ಮತ್ತೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ

0
Siddaramaiah

ಬೆಂಗಳೂರು: ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ‌ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ಧವಾಗಿ ನಿಂತು ಹೋರಾಟ ಮುನ್ನಡೆಸುತ್ತದೆ ಎನ್ನುವ ಭರವಸೆ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಶಕ್ತಿ ಪ್ರತಿಜ್ಞೆ 2025” ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರೆಸ್ಸೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದ ಅವರು, ಬಿಜೆಪಿ ಪಕ್ಷಕ್ಕೆ ಭಾರತೀಯ ಸಮಾಜಕ್ಕೆ ಪೂರಕವಾದ ಸಿದ್ಧಾಂತವೇ ಇಲ್ಲ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಬಿಜೆಪಿಯದ್ದು. ಜೆಡಿಎಸ್ ರಾಜ್ಯದ ಕೆಲವೇ ಸ್ಥಳಗಳಲ್ಲಿ ಅಸ್ತಿತ್ವದಲ್ಲಿದೆ, ಈ ಪಕ್ಷಕ್ಕೂ ಸರಿಯಾದ ಸಿದ್ಧಾಂತ ಇಲ್ಲ ಎಂದವರು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಕಮಂಡಲವಾದಿಗಳು ಮತ್ತು ಮನುವಾದಿಗಳು. ಇವರ ಈ ಜನವಿರೋಧಿ ಇತಿಹಾಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೆನಪಿಡಬೇಕು ಎಂದ ಸಿಎಂ, ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ಕೂಡ ನೆನಪಿಡಬೇಕು ಎಂದರು.

ಕಾಂಗ್ರೆಸ್ ಭಾರತ ದೇಶಕ್ಕೆ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಸಂಘ ಪರಿವಾರವು ಬ್ರಿಟಿಷರ ಜೊತೆ ಶಾಮೀಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತು ಎನ್ನುವುದು ಇತಿಹಾಸ. ಆರ್‌ಎಸ್‌ಎಸ್ 1925ರಲ್ಲೇ ಆರಂಭವಾದರೂ ಯಾವತ್ತೂ ಕೂಡ ಹೆಡಗೆವಾರ್ ಆಗಲಿ, ಗುರೂಜಿ ಹೆಸರಿನವರಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಲಿಲ್ಲ. ಇದನ್ನು ಯುವ‌ಮಿತ್ರರು ಅರ್ಥ ಮಾಡಿಕೊಳ್ಳಬೇಕು ಎಂದರು.

ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಗಿ ಜನಸಂಘ ಆರಂಭವಾಯಿತು. ಬಳಿಕ ಬಿಜೆಪಿ ಆಯಿತು. ಇವರು ದೇಶಭಕ್ತಿ ಬಗ್ಗೆ ಭಯಾನಕವಾಗಿ ಮಾತನಾಡುತ್ತಾರೆ, ಆದರೆ ದೇಶದ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದರು. ಭಾರತೀಯ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಬಿಜೆಪಿ ಮಾಡುವುದೇ ಇಲ್ಲ. ನರೇಂದ್ರ ಮೋದಿಯವರು ಬಾಯಲ್ಲಿ “ಸಬ್ ಕ ಸಾಥ್ – ಸಬ್ ಕ ವಿಕಾಸ್” ಅಂತ ಡೈಲಾಗ್ ಹೊಡಿತಾರೆ. ಆದರೆ, ಬಿಜೆಪಿಯಲ್ಲಿರುವ 240 ಮಂದಿ ಸಂಸದರಲ್ಲಿ ಒಬ್ಬರೂ ಅಲ್ಪ ಸಂಖ್ಯಾತ ಸಮುದಾಯದವರಿಲ್ಲಎಂದು ಸಿದ್ದರಾಮಯ್ಯ ಕೆಣಕಿದರು.

ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಆರ್‌ಎಸ್‌ಎಸ್‌ನ ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಪತ್ರ ಬರೆದಿದ್ದಾರೆ. ಇದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಸುವ ಕೆಲಸವನ್ನು ಯುವ ಕಾಂಗ್ರೆಸ್ ಸೇನಾನಿಗಳು ಮಾಡಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

You may have missed