ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಭೀತಿ

0
Earthquake-1-300x161

ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪವು ಗುರುವಾರ ಮುಂಜಾನೆ ಮೊಲುಕ್ಕಾ ಸಮುದ್ರದಲ್ಲಿ ಸಂಭವಿಸಿದ್ದು, ಇದರ ಕೇಂದ್ರಬಿಂದುವು ಸುಮಾರು 30 ಕಿಲೋಮೀಟರ್ ಆಳದಲ್ಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಕಂಪನದ ತೀವ್ರತೆ 7.8 ಎಂದು ಅಂದಾಜಿಸಲಾಗಿದ್ದರೂ ನಂತರ 7.4ಕ್ಕೆ ತಿದ್ದುಪಡಿಸಲಾಗಿದೆ.

ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ, ಕೇಂದ್ರಬಿಂದುವಿನಿಂದ 1,000 ಕಿಲೋಮೀಟರ್ ವ್ಯಾಪ್ತಿಯೊಳಗಿನ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾದ ಕರಾವಳಿ ಪ್ರದೇಶಗಳಿಗೆ “ಅಪಾಯಕಾರಿ ಸುನಾಮಿ ಅಲೆಗಳು” ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಇಂಡೋನೇಷ್ಯಾ BMKG ಸಂಸ್ಥೆಯೂ ಭೂಕಂಪದ ತೀವ್ರತೆಯನ್ನು 6.4 ಎಂದು ದಾಖಲಿಸಿದ್ದು, ಸುಮಾರು 13 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿಸಿದೆ.

ಇಂಡೋನೇಷ್ಯಾ ವಿಶ್ವದ ಅತ್ಯಂತ ಭೂಕಂಪನಶೀಲ ಪ್ರದೇಶಗಳಲ್ಲಿ ಒಂದಾಗಿದ್ದು, ಪೆಸಿಫಿಕ್ ರಿಂಗ್ ಆಫ್ ಫೈರ್ ವ್ಯಾಪ್ತಿಯಲ್ಲಿ ಇರುವುದರಿಂದ ಇಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಸಾಮಾನ್ಯವಾಗಿದೆ.

ಪೆಸಿಫಿಕ್ ಮಹಾಸಾಗರವನ್ನು ಸುತ್ತುವರೆದಿರುವ ಈ ಪ್ರದೇಶವು ಜಗತ್ತಿನ ಸುಮಾರು 90% ಭೂಕಂಪಗಳಿಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದಕ್ಕೂ ಮುನ್ನ ಮಾರ್ಚ್ 3ರಂದು ಸುಮಾತ್ರಾ ಕರಾವಳಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದರೂ ಹೆಚ್ಚಿನ ಹಾನಿ ಸಂಭವಿಸಿರಲಿಲ್ಲ.

ಪ್ರಸ್ತುತ ಭೂಕಂಪದ ಪರಿಣಾಮವಾಗಿ ಹಾನಿ ಪ್ರಮಾಣದ ಕುರಿತು ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

You may have missed